Home » Kannada News » ಕಿವೀಸ್‌ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ತಂಡ ಪ್ರಕಟಿಸಿದ ಬಾಂಗ್ಲಾದೇಶ!

ಕಿವೀಸ್‌ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ತಂಡ ಪ್ರಕಟಿಸಿದ ಬಾಂಗ್ಲಾದೇಶ!

ಹೈಲೈಟ್ಸ್‌:

  • ಬಾಂಗ್ಲಾದೇಶ-ನ್ಯೂಜಿಲೆಂಡ್‌ ನಡುವಣ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ.
  • ಕಿವೀಸ್‌ ವಿರುದ್ಧದ ಕದನಕ್ಕೆ 19 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾ.
  • ಸ್ಟಾರ್‌ ಆಟಗಾರರ ಅನುಪಸ್ಥಿತಿ ಹೊಂದಿರುವ ನ್ಯೂಜಿಲೆಂಡ್‌ಗೆ ಲೇಥಮ್‌ ನಾಯಕ.

ಢಾಕಾ: ಇತ್ತೀಚೆಗಷ್ಟೇ ತಾಯ್ನಾಡಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ 4-1 ಅಂತರದಲ್ಲಿ ಬಗ್ಗುಬಡಿದಿರುವ ಬಾಂಗ್ಲಾದೇಶ ತಂಡ ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ಧತೆ ಕೈಗೊಂಡಿದೆ.

ಇದೀಗ ಪ್ರವಾಸಿ ನ್ಯೂಜಿಲೆಂಡ್‌ ಎದುರು ಅಷ್ಟೇ ಪಂದ್ಯಗಳ ಟಿ20 ಸರಣಿಯನ್ನು ಆಡಲಿರುವ ಆತಿಥೇಯ ಬಾಂಗ್ಲಾದೇಶ ತಂಡ ಈ ಸಲುವಾಗಿ ಮಹ್ಮೂದುಲ್ಲ ಸಾರಥ್ಯದ 19 ಸದಸ್ಯರ ಬಲಿಷ್ಠ ತಂಡವನ್ನು ಗುರುವಾರ ಪ್ರಕಟ ಮಾಡಿದೆ. 2003ರ ಬಳಿಕ ಇದೇ ಮೊದಲ ಬಾರಿ ದ್ವಿಪಕ್ಷೀಯ ಸರಣಿ ಸಲುವಾಗಿ ನ್ಯೂಜಿಲೆಂಡ್‌ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವುದು ವಿಶೇಷ.

ಇನ್ನು ಟಿ20 ತಂಡಕ್ಕೆ ಅನುಭವಿಗಳಾದ ವಿಕೆಟ್‌ಕೀಪರ್‌ ಮುಷ್ಫಿಕರ್‌ ರಹೀಮ್ ಮತ್ತು ಲಿಟನ್‌ ದಾಸ್‌ ಕಮ್‌ಬ್ಯಾಕ್‌ ಮಾಡಿದ್ದಾರೆ. ಕಳೆದ ಜಿಂಬಾಬ್ವೆ ಪ್ರವಾಸದ ವೇಳೆ ಪೋಷಕರ ಆರೋಗ್ಯ ಸಮಸ್ಯೆ ಕಾರಣ ರಹೀಮ್‌ ತಾಯ್ನಾಡಿಗೆ ಹಿಂದಿರುಗಿದ್ದರು. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಅವರು ಆಡಿರಲಿಲ್ಲ. ಲಿಟನ್‌ ದಾಸ್‌ ತೊಡೆ ಸ್ನಾಯು ಸೆಳೆತ ಕಾರಣ ಆಸೀಸ್‌ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದರು. ಈಗ ಸಂಪೂರ್ಣ ಚೇತರಿಸಿ ತಂಡಕ್ಕೆ ಮರಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸುವ ಟಾಪ್ 3 ಆಟಗಾರರ ಹೆಸರಿಸಿದ ಕಾರ್ತಿಕ್!

“ತಂಡದ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪುನರಾಗಮನ ಖಂಡಿತಾ ನಿರಾಳ ತಂದುಕೊಡುತ್ತದೆ. ಮುಂಬರುವ ವಿಶ್ವಕಪ್‌ ಟೂರ್ನಿ ಹೊತ್ತಿಗೆ ಈ ಆಟಗಾರರು ಶ್ರೇಷ್ಠ ಲಯ ಕಂಡುಕೊಳ್ಳುತ್ತಾರೆಂಬ ವಿಶ್ವಾಸವಿದೆ. ಜೊತೆಗೆ ತಂಡದ ಬೌಲಿಂಗ್‌ ವಿಭಾಗದಲ್ಲಿ ವೈವಿಧ್ಯತೆ ತರುವ ನಿಟ್ಟಿನಲ್ಲಿ ಅಮಿನುಲ್‌ ಇಸ್ಲಾಮ್‌ ಅವರನ್ನು ಸೇರಿಸಲಾಗಿದೆ,” ಎಂದು ಬಾಂಗ್ಲಾದೇಶ ತಂಡದ ಮುಖ್ಯ ಸೆಲೆಕ್ಟರ್‌ ಮಿನ್ಹಾಜುಲ್ ಅಬೇದಿನ್ ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ. ಪಿತೃ ವಿಯೋಗ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಯುವ ಪ್ರತಿಭೆ ಅಮಿನುಲ್‌ ಇಸ್ಲಾಮ್‌ ಹೊರಗುಳಿದಿದ್ದರು.

ಆಗಸ್ಟ್‌ 24ರಂದು ಢಾಕಾಗೆ ಕಾಲಿಡಲಿರುವ ನ್ಯೂಜಿಲೆಂಡ್‌ ತಂಡ ಒಂದೆರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಬಳಿಕ 5 ಪಂದ್ಯಗಳ ಟಿ20 ಸರಣಿಗೆ ಮುಂದಾಗಲಿದೆ. ಢಾಕಾದ ಶೇರ್‌ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸರಣಿಯ ಐದೂ ಪಂದ್ಯಗಳು ನಡೆಯಲಿದ್ದು, ಬಯೋ ಬಬಲ್ ವಾತಾವರಣದ ಅಡಿಯಲ್ಲಿ ಈ ಸರಣಿಯನ್ನು ಆಯೋಜಿಸಲಾಗುತ್ತದೆ.

ನ್ಯೂಜಿಲೆಂಡ್‌ಗೆ ಲೇಥಮ್ ನಾಯಕ
ನ್ಯೂಜಿಲೆಂಡ್‌ ತಂಡದ ಎಂದಿನ ನಾಯಕ ಕೇನ್‌ ವಿಲಿಯಮ್ಸನ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಸೆಪ್ಟೆಂಬರ್‌ನಲ್ಲಿ ಐಪಿಎಲ್ 2021 ಟೂರ್ನಿಯ ಎರಡನೇ ಚರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ವಿಕೆಟ್‌ಕೀಪರ್ ಟಾಮ್‌ ಲೇಥಮ್‌ ಸಾರಥ್ಯದ ಯುವ ಆಟಗಾರರನ್ನು ಒಳಗೊಂಡ ನ್ಯೂಜಿಲೆಂಡ್ ತಂಡ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದೆ.

ಆರ್‌ಸಿಬಿ ಆಟಗಾರನಿಗೆ ನಿರಾಸೆ! 2021ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಹೀಗಿದೆ
ಮಹ್ಮೂದುಲ್ಲ (ನಾಯಕ), ಶಕಿಬ್ ಅಲ್ ಹಸನ್, ಮುಷ್ಫಿಕರ್‌ ರಹೀಮ್, ಮುಸ್ತಾಫಿಝುರ್‌ ರೆಹಮಾನ್, ಲಿಟನ್‌ ದಾಸ್, ಮೊಸಾದೆಕ್ ಹುಸೇನ್, ಆಫಿಫ್ ಹುಸೇನ್, ಮೊಹಮ್ಮದ್‌ ನೈಮ್, ನೂರುಲ್ಲ ಹಸನ್, ಶಾಮಿಮ್ ಹುಸೇನ್, ರುಬೆನ್ ಹುಸೇನ್, ತಾಸ್ಕಿನ್‌ ಆಹ್ಮದ್, ಮೊಹಮ್ಮದ್‌ ಸೈಫುದ್ದೀನ್, ಶೋರಿಫುಲ್ ಇಸ್ಲಾಮ್, ತೈಜುಲ್ ಇಸ್ಲಾಮ್‌, ಮೆಹ್ದಿ ಹಸನ್, ಅಮಿನುಲ್ ಇಸ್ಲಾಮ್, ನಸುಮ್‌ ಅಹ್ಮದ್.


Source link

x

Check Also

ಶಾಲೆಗಳಲ್ಲಿ ಕಲಿಸುತ್ತಾರೆ ಜೀವನ ಪಾಠ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 23

ಈ ದೇಶಕ್ಕೆ ಬಂದ ಆರಂಭದಲ್ಲೇ ನಮ್ಮ ಕಂಪನಿಯವರು ಅಮೆರಿಕನ್ ಆಂಗ್ಲದ ಪರಿಚಯ ಮಾಡಿಸಲೆಂದೇ ESL – English as Second ...