Home » Kannada News » ಸ್ವಾತಂತ್ರ್ಯ ದಿನಕ್ಕೆ ಅಮೃತ ಮಹೋತ್ಸವದ ಸಂಭ್ರಮ; ಬೆಳಗ್ಗೆ 7 ಗಂಟೆಗೆ ಪ್ರಧಾನಿಯಿಂದ ಧ್ವಜಾರೋಹಣ

ಸ್ವಾತಂತ್ರ್ಯ ದಿನಕ್ಕೆ ಅಮೃತ ಮಹೋತ್ಸವದ ಸಂಭ್ರಮ; ಬೆಳಗ್ಗೆ 7 ಗಂಟೆಗೆ ಪ್ರಧಾನಿಯಿಂದ ಧ್ವಜಾರೋಹಣ


ಹೊಸದಿಲ್ಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ದೇಶ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯ ಕೆಂಪುಕೋಟೆಯಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಇಂದು ಬೆಳಗ್ಗೆ 7 ಗಂಟೆಗೆ ಕೆಂಪುಕೋಟೆಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಸಶಸ್ತ್ರ ಪಡೆಗಳ ಮುಖ್ಯಸ್ಥರು ಬರಮಾಡಿಕೊಳ್ಳುವರು. ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಧ್ವಜಾರೋಹಣ ನೆರವೇರಿಸುವರು. ಧ್ವಜಾರೋಹಣ ನಡೆಯುತ್ತಿದ್ದಂತೆಯೇ ಇದೇ ಮೊದಲ ಬಾರಿಗೆ ಎರಡು ಮಿಗ್‌-17 ವಿಮಾನಗಳು ಪುಷ್ಪ ವೃಷ್ಟಿ ಸುರಿಸಲಿವೆ. ಬಳಿಕ ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಕೆಲವೇ ಗಣ್ಯರನ್ನು ಆಹ್ವಾನಿಸಲಾಗಿದೆ. ಅಲ್ಲದೆ, ಸಾಮಾಜಿಕ ಅಂತರ ಸೇರಿ ಹಲವು ನಿಯಮ ಪಾಲಿಸುವುದು ಕಡ್ಡಾಯವಾಗಿದೆ.

ಪ್ರಧಾನಿಯಾಗಿ ಮೋದಿ ಅವರಿಗೆ ಇದು 8ನೇ ಸ್ವಾತಂತ್ರ್ಯೋತ್ಸವ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ ಸೇರಿದಂತೆ ಈ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ ಎಲ್ಲ 32 ಅಥ್ಲೀಟ್‌ಗಳು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಇಬ್ಬರು ಅಧಿಕಾರಿಗಳನ್ನು ಕೆಂಪುಕೋಟೆಗೆ ಆಹ್ವಾನಿಸಲಾಗಿದೆ. ಅಲ್ಲದೆ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ 240 ಕ್ರೀಡಾಪಟುಗಳು, ಸಹಾಯಕ ಸಿಬ್ಬಂದಿ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಒಕ್ಕೂಟಗಳ ಅಧಿಕಾರಿಗಳನ್ನು ಆಹ್ವಾನಿಸಲಾಗಿದ್ದು, ಅವರಿಗೆ ಕೆಂಪುಕೋಟೆಯ ಆವರಣಕ್ಕೆ ತಾಗಿಕೊಂಡಿರುವ ಜ್ಞಾನಪಥದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಧಾನಿಯವರು ತಮ್ಮ ಅಧಿಕೃತ ನಿವಾಸಕ್ಕೂ ಅಥ್ಲೀಟ್‌ಗಳನ್ನು ಆಹ್ವಾನಿಸಿದ್ದು, ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ. ಕೊರೊನಾ ಸೇನಾನಿಗಳಿಗೂ ಪ್ರತ್ಯೇಕ ಬ್ಲಾಕ್‌ ನಿರ್ಮಿಸಲಾಗಿದೆ. ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಕೊರೊನಾ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದರು. ಈ ವರ್ಷದ ಮಾರ್ಚ್ 10ರಂದು ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ. 2023ರ ಆಗಸ್ಟ್‌ 15ರವರೆಗೂ ದೇಶದ್ಯಂತ ಅಮೃತ ಮಹೋತ್ಸವ ಆಚರಣೆ ನಡೆಯಲಿದೆ.


Source link

x

Check Also

ಶಾಲೆಗಳಲ್ಲಿ ಕಲಿಸುತ್ತಾರೆ ಜೀವನ ಪಾಠ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 23

ಈ ದೇಶಕ್ಕೆ ಬಂದ ಆರಂಭದಲ್ಲೇ ನಮ್ಮ ಕಂಪನಿಯವರು ಅಮೆರಿಕನ್ ಆಂಗ್ಲದ ಪರಿಚಯ ಮಾಡಿಸಲೆಂದೇ ESL – English as Second ...